ಈ ಒಂದು ಪ್ರದೇಶವು ಹಿಂದಿನ ಕಾಲದಲ್ಲಿ (ಮಣಿಚೂಲ ಪರ್ವತ) ಭೂ ಲೋಕದ ಸ್ವರ್ಗ ಎಂದು ಪ್ರಖ್ಯಾತಿ ಪಡೆದಿತ್ತು. ಈ ಪ್ರದೇಶವು ದಟ್ಟವಾದ ಕಾಡು ಗುಡ್ಡಗಾಡಿನಿಂದ ಸುತ್ತುವರೆದಿತ್ತು. ಇಲ್ಲಿರುವ ಎಲ್ಲಾ ರೀತಿಯ ಪ್ರಾಣಿಪಕ್ಷಿಗಳು ಜೀವಿಗಳೂ ಮನುಷ್ಯರು ಹೀಗೆ ಪ್ರತಿಯೊಂದು ಜೀವಿಯು ಯಾವುದೇ ದ್ವೇಷ ವೈರತ್ವ ಇಲ್ಲದೇ ಪ್ರೀತಿ ಪ್ರೇಮಭಾವದಿಂದ ಒಂದನ್ನೊಂದು ಪರಸ್ಪರ ಪ್ರೀತಿ ವಿಶ್ವಾಸ ಮಮತೆ ಕಳಕಳಿ ಕಾಳಜಿಯಿಂದ ಬದುಕುತ್ತಿದ್ದವು. ಹಾಗೆಂದೇ ಈ ಪ್ರದೇಶಕ್ಕೆ (ಪ್ರೇಮಪುರ) ಎಂತಲೂ ಕರೆಯುತ್ತಿದ್ದರು.
(ಮಲ್ಲಾರಿ ಮಹಾತ್ಮೆ ಗ್ರಂಥ ಪ್ರಕಾರ) ಕೃತಾಯುಗದ ಕಾಲದಲ್ಲಿ ಮಲ್ಲಾಸುರ ಮತ್ತು ಮಣಿಕಾಸುರ ಎಂಬ ಇಬ್ಬರು ಸಹೋದರ ರಾಕ್ಷಸರು 12 ವರ್ಷಗಳ ಕಾಲ ತನ್ನ ಹೆಬ್ಬೆರಳಿನ ಮೇಲೆ ನಿಂತು ಬ್ರಹ್ಮದೇವರ ಕುರಿತು ಕಠಿಣ ತಪಸ್ಸನ್ನು ಆಚರಿಸುತ್ತಾರೆ. ಇವರಿಬ್ಬರ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ವರದಾನವನ್ನು ಕೊಡುತ್ತಾರೆ. ಬ್ರಹ್ಮದೇವರ ವರವನ್ನು ಪಡೆದ ಸಹೋದರ ರಾಕ್ಷಸರು ಇಡೀ ಬ್ರಹ್ಮಾಂಡವೇ ನಮ್ಮದು, ನಾವು ಯಾರಿಗೂ ಕಡಿಮೆಯಿಲ್ಲ ಎಂದು ಬೀಗುತ್ತ ಭೂಮಿಯ ಮೇಲೆ ಅತ್ಯಂತ ಉಪಟಳವನ್ನು ಮಾಡುತ್ತಾರೆ. ಹೀಗೆ ಭೂಲೋಕ ಸಂಚರಿಸುತ್ತಾ ಹೊರಟಾಗ ಅವರ ಕಣ್ಣಿಗೆ ಬಿದ್ದ ಸ್ಥಳ (ಪ್ರೇಮಪುರ ಮಣಿಚೂಲ ಪರ್ವತ). ಅಲ್ಲಿ ಸಪ್ತ ಋಷಿಗಳು ಯಜ್ಞ ಹೋಮ ಹವನ ಮಾಡುತ್ತಿರುತ್ತಾರೆ. ಇದನ್ನು ಕೇಳಿದ ಮಣಿ-ಮಲ್ಲರು ರಾಕ್ಷಸರು ಪ್ರೇಮಪುರಕ್ಕೆ ಬಂದು ಋಷಿಗಳ ಯಜ್ಞವನ್ನು ಹಾಳುಮಾಡುತ್ತಾರೆ, ಇಲ್ಲಿರುವ ಪ್ರಾಣಿಗಳಿಗೆ ಅದೇ ಯಜ್ಞದಲ್ಲಿ ಸುಟ್ಟು ತಿನ್ನುತ್ತಾರೆ. ಇಡೀ ಬ್ರಹ್ಮಾಂಡಕ್ಕೆ ನಾವೇ ದೇವರು, ನಮ್ಮನ್ನು ಹೊರತುಪಡಿಸಿ ಅನ್ಯ ದೇವರ ಪೂಜೆ ನಡೆಯಬಾರದು ಎಂದು ಆಜ್ಞೆ ಮಾಡುತ್ತಾರೆ.
ಇವರಿಬ್ಬರು ರಾಕ್ಷಸರಿಂದ ಬೇಸತ್ತ ಎಲ್ಲಾ ದೇವತೆಗಳು, ಋಷಿ ಮುನಿಗಳು, ಅಮಾಯಕರು ಹೀಗೆ ಪ್ರತಿಯೊಬ್ಬರು ಶಿವನ ಮೊರೆ ಹೋಗುತ್ತಾರೆ. ಆಗ ಮಹಾದೇವನು ಇವರ ಉಪಟಳ ಕೇಳಿ ಅತ್ಯಂತ ಸಿಟ್ಟಿನಿಂದ ತನ್ನ ಜಡೆ ನೆಲಕ್ಕೆ ಅಪ್ಪಳಿಸಿ ಘೃತಮಾರಿ ದೇವಿಯನ್ನು ಉದ್ಭವಿಸುತ್ತಾನೆ. ಆಗ ಶಿವನು ಮಾರ್ತಾಂಡ ಭೈರವ ರೂಪತಾಳಿ ಕುದುರೆಯ ಸವಾರಿ ಮಾಡಿ ಕೈಯಲ್ಲಿ ಖಡ್ಗ, ಹಣೆಯ ತುಂಬಾ ಭಂಡಾರ, ಚತುರ್ಭುಜ ಹಸ್ತದಿಂದ ಅವತಾರ ತಾಳಿ ಅತ್ಯಂತ ಕ್ರೋಧದಿಂದ ಮಾರ್ತಾಂಡ ಭೈರವ (ಕೋಟಿ ಸೂರ್ಯಗಳ ತೇಜ) ರೂಪ ತಾಳಿ ತನ್ನ ಏಳು ಕೋಟಿ ಸೈನ್ಯವನ್ನು ಜೊತೆಗೆ ತಂದು (ಮಾರ್ಗಶಿರ ಮಾಸ ಶುಕ್ಲ ಪಕ್ಷದ ಚಂಪಾ ಷಷ್ಠಿ ದಿನದಂದು) ಮಣಿಕಾಸುರ ಮಲ್ಲಾಸುರ ರಾಕ್ಷಸರ ಸಂಹಾರ ಮಾಡಿ ಅಭಯ ಹಸ್ತದಿಂದ ಲಿಂಗರೂಪದಲ್ಲಿ ಪ್ರೇಮಪುರದಲ್ಲಿ ನೆಲೆಸಿದ್ದರು.
ಮೈರಾಳ ಎನ್ನುವ ಮಣ್ಣಿನಿಂದ ಸಪ್ತ ಋಷಿಗಳು ಲಿಂಗವನ್ನು ಮಾಡಿ ಅದಕ್ಕೆ ಮಾರ್ತಾಂಡ ಭೈರವನ ಸ್ವರೂಪವೆಂದು ಪೂಜಿಸಲ್ಪಟ್ಟರು. ಹಾಗಾಗಿ ಮೈರಾಳ ಎನ್ನುವ ಪದವೇ ಮುಂದೆ ಮೈಲಾರ, ಮೈಲಾರಲಿಂಗ ಎಂದು ಹೆಸರಾಯಿತು. ಈ ಮೈಲಾರ ಕ್ಷೇತ್ರದಲ್ಲಿ ಶಿವನು ರಾಕ್ಷಸರನ್ನು ಸಂಹಾರ ಮಾಡಿ ಇಲ್ಲೇ ನೆಲೆಸಿದ್ದಾನೆ ಎನ್ನುವ ಸುದ್ದಿ ಎಲ್ಲಾ ದಿಕ್ಕುಗಳಿಗೂ ಹರಡಿತು. ಆಗ ಎಲ್ಲಾ ದಿಕ್ಕಿನಿಂದ ಜನರು ಭಕ್ತರು ದೇವರ ದರ್ಶನಕ್ಕೆ ಸಾಗರದಂತೆ ಧಾವಿಸುತ್ತಿದ್ದರು. ಅಷ್ಟೊಂದು ಜನಸಾಗರ ಬರುತ್ತಿದ್ದಾರೆ ಎಂದರೆ ಈ ಕ್ಷೇತ್ರ ಕಾಶಿಗಿಂತ ಕಡಿಮೆಯಿಲ್ಲ. ಇದು ದಕ್ಷಿಣ ದಿಕ್ಕಿನ ಕಾಶಿ (ದಕ್ಷಿಣ ಕಾಶಿ) ಎಂದು ಪ್ರಖ್ಯಾತಿ ಪಡೆದಿತ್ತು.
ಈ ಕ್ಷೇತ್ರವು ಸಮಯದ ಜೊತೆಗೆ ಅತ್ಯಂತ ಏರಿಳಿತ ಕಂಡು, ಒಮ್ಮೆ ಸಂಪೂರ್ಣವಾಗಿ ಹಾಳು ಬಿದ್ದು ಮತ್ತೆ ಪುನಶ್ಚೇತನ ಕಂಡು ಖಾನಾಪುರ ಎಂಬ ಹೆಸರಿನಿಂದ ಪ್ರಸ್ತುತ ದೇಶ ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತ ಅತ್ಯಂತ ಜಾಗೃತ ಸ್ಥಾನವಾಗಿ, ಭಕ್ತರ ನಂಬಿಕೆಯ ತಾಣವಾಗಿ ಕ್ಷೇತ್ರವು ಮೈಲಾರ ಮಲ್ಲಣ್ಣ ಖಂಡೋಬಾ ದೇವಸ್ಥಾನವೆಂದು ಪ್ರಚಲಿತಗೊಂಡಿದೆ. ಈ ದೇವಸ್ಥಾನವು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಳಸಾರೋಹಣವಾಗಿದೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಹಾಗೂ ಅಹಲ್ಯಾದೇವಿ ಹೋಳಕರ ಕಾಲದಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ ಎಂದು ಹೇಳಲಾಗುತ್ತದೆ.
ಈ ದೇವರಿಗೆ ಮಲ್ಲಣ್ಣ, ಮಲ್ಲಾರಿ, ಖಂಡೋಬಾ, ಮಾರ್ತಾಂಡ ಭೈರವ, ಮಾಳಸಾಕಾಂತ, ಮೈಲಾರ ಲಿಂಗ, ಮಾಲತೇಶ - ಹೀಗೆ ಹಲವಾರು ಹೆಸರಿನಿಂದ ಭಕ್ತರು ಕರೆಯುತ್ತಾರೆ. ಈ ದೇವಸ್ಥಾನವು ಮೈಲಾರ ಲಿಂಗನ ದೇವಸ್ಥಾನಗಳಲ್ಲಿ ಮೂಲ ದೇವಸ್ಥಾನ ಎಂದು ಹೇಳಲಾಗುತ್ತದೆ. ಇಲ್ಲಿ 108 ಪವಿತ್ರ ಕುಂಡಗಳು (ಪುಷ್ಕರಣಿಗಳು) ಇದ್ದು, ಒಂದೊಂದು ಕುಂಡವು ಒಂದೊಂದು ವಿಶೇಷತೆಯನ್ನು ಹೊಂದಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಪವಿತ್ರ ಕುಂಡದಲ್ಲಿ ಸ್ನಾನ ಮಾಡಿ, ಕೊಬ್ಬರಿ ಭಂಡಾರ (ಅರಶಿಣ) ಮಿಶ್ರಣ ಮಾಡಿ ದೇವರಿಗೆ ಅರ್ಪಿಸಿ ದೇವಸ್ಥಾನದ ಸುತ್ತ "ಶಿವ ಮಲ್ಲಾರಿ ಏಳು ಕೋಟಿ ಉಛೇ" ಎಂದು ಹಾರಿಸುತ್ತಾರೆ.
ಇಲ್ಲಿ ಪ್ರತಿ ವರ್ಷ ಭಟ್ಟಿ ಅಮಾವಾಸ್ಯೆಯಿಂದ ಎಳ್ಳು ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಅತೀ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ. ಅದೇ ರೀತಿ ವಿಜಯ ದಶಮಿ ಹಾಗೂ ಸೋಮವತಿ ಅಮಾವಾಸ್ಯೆಯಂದು ದೇವರ ಪಲ್ಲಕ್ಕಿ ಉತ್ಸವಗಳು ಜರುಗುತ್ತವೆ. ವಿಶೇಷವಾಗಿ ಅತಿ ಹೆಚ್ಚು ಕುರುಬ ಜನಾಂಗದ ಕುಲದೇವರಾಗಿ, ಎಲ್ಲಾ ಜಾತಿಯ ಜನರಿಗೆ ರಕ್ಷಕನಾಗಿ ಶಿವನು ಮೈಲಾರ ಮಲ್ಲಣ್ಣನಾಗಿ ನೆಲೆಸಿದ್ದಾನೆ. ಈ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಿರುತ್ತಾರೆ.
ಈ ದೇವರಿಗೆ ವಿಶೇಷವಾಗಿ ಹೋಳಿಗೆ, ಪಾಯಸ, ಸಜ್ಜೆ ರೊಟ್ಟಿ, ಬದನೇಕಾಯಿ ಪಲ್ಯ, ಭರ್ತಾ, ಬಾಳೆಹಣ್ಣು, ಈ ರೀತಿಯ ನೈವೇದ್ಯ ಅರ್ಪಿಸಲಾಗುತ್ತದೆ. ಇಲ್ಲಿ ವಿಶೇಷವಾಗಿ ಮೈಲಾರ ಲಿಂಗನ ಹೆಸರಿನ ಮೇಲೆ ಗುರು ದೀಕ್ಷೆ ಭಕ್ತಾದಿಗಳು ಪಡೆಯುತ್ತಾರೆ. ದೀಕ್ಷೆ ಪಡೆದ ಭಕ್ತನಿಗೆ ವಗ್ಗಯ್ಯ, ಗೋರವ, ವಾಘೇ, ವಾರು ಎಂದು ಕರೆಯುತ್ತಾರೆ. ಇಲ್ಲಿಗೆ ಬಂದ ಭಕ್ತಾದಿಗಳು ದೇವರ ದರ್ಶನ ಪಡೆದ ನಂತರ ವಗ್ಗಯ್ಯರ ಕೋಟಂಬಿ ತುಂಬಿಸಿ ಅವರಿಗೆ ಊಟಮಾಡಿಸಿ ಆಶೀರ್ವಾದ ಪಡೆಯುತ್ತಾರೆ. ವಗ್ಗಯ್ಯರು ಸಾಕ್ಷಾತ್ ಮೈಲಾರ ಲಿಂಗನ ರೂಪವೆಂದು ನಂಬಲಾಗುತ್ತದೆ. ಪ್ರಸ್ತುತ ವಂಶ ಪಾರಂಪರೆಯಾಗಿ ಹಿರಿ ವಗ್ಗಯ್ಯರು ದೇವಸ್ಥಾನದಲ್ಲಿ ದೀಕ್ಷೆ ಕೊಡುವ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ವರ್ಷವಿಡೀ ಪ್ರತಿ ಭಾನುವಾರ ಹಾಗೂ ಅಮಾವಾಸ್ಯೆ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿರುತ್ತಾರೆ.